ಬಸವ ಧರ್ಮ ಪೀಠBasava Dharma Peeta
ಮೆನುಮುಚ್ಚಿ
ಪ್ರಸಾರಕರ ನೋಂದಣಿ+91 95919 38666

ಇತಿಹಾಸ

ಶರಣರ ನಡುವೆ ಇಷ್ಟಲಿಂಗ ಹಿಡಿದು ಕುಳಿತ ಗುರು ಬಸವಣ್ಣನವರ ಚಿತ್ರ — ಕಾಯಕವೇ ಕೈಲಾಸ

ಲಿಂಗಾಯತ ಧರ್ಮ ಸಂಸ್ಥಾಪಕರು, ಗುರು ಬಸವಣ್ಣನವರು

ಕೂಡಲಸಂಗಮವು ಬಸವಣ್ಣನವರ ವಿದ್ಯಾಭೂಮಿ ಮತ್ತು ಐಕ್ಯಕ್ಷೇತ್ರವಾಗಿದ್ದು, ಲಿಂಗಾಯತರಿಗೆ ಅತ್ಯಂತ ಪವಿತ್ರ ಧರ್ಮಕ್ಷೇತ್ರವಾಗಿದೆ. ಈ ಪುಣ್ಯಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಲಿಂ. ಲಿಂಗಾನಂದ ಮಹಾಸ್ವಾಮಿಗಳು ಮತ್ತು ಲಿಂ. ಮಾತೆ ಮಹಾದೇವಿಯವರ ಮಾರ್ಗದರ್ಶನದಲ್ಲಿ 'ಬಸವ ಧರ್ಮ ಪೀಠ ಟ್ರಸ್ಟ್' ಸ್ಥಾಪಿಸಲಾಯಿತು. ಪ್ರಸ್ತುತ ಟ್ರಸ್ಟ್ 26 ಎಕರೆ ಜಮೀನಿನಲ್ಲಿ 'ಮಹಾಮನೆ' ಎಂಬ ಬೃಹತ್ ಮಠವನ್ನು ನಿರ್ಮಿಸಿದೆ. ಇದರಲ್ಲಿ ವಿಶೇಷ ಶಕ್ತಿಕೇಂದ್ರವಾದ ಗಣಲಿಂಗ ಮಂಟಪ, ಬಸವ ಧ್ಯಾನ ಮಂಟಪ, ಶರಣಾಲಯ ಹಾಗೂ 20 ಭವ್ಯ ಶರಣರ ಮಂಟಪಗಳಿವೆ. ಭಕ್ತರು ತಮ್ಮ ಜೀವನದ ಶುಭ ಸಂದರ್ಭಗಳಲ್ಲಿ ಇಲ್ಲಿಗೆ ಭೇಟಿ ನೀಡಿ, ಪೂಜೆ ಮತ್ತು ದಾಸೋಹ ನೆರವೇರಿಸಿ ಧರ್ಮಗುರುವಿಗೆ ಕೃತಜ್ಞತೆ ಸಲ್ಲಿಸಲು ಆಹ್ವಾನಿಸಲಾಗಿದೆ.

ಪೂರ್ಣ ಇತಿಹಾಸ ಓದಿ

ಬಸವ ಧರ್ಮ ಪೀಠ (ರಿ. ಟ್ರಸ್ಟ್)ಮಹಾಮನೆ ಸಂಕೀರ್ಣ, ಕೂಡಲ ಸಂಗಮ-587141 ತಾ|| ಹುನಗುಂದ, ಜಿಲ್ಲಾ|| ಬಿಜಾಪುರ

ವಿಶ್ವಗುರು ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಅವತರಿಸಿ ಬಂದ ಮಾನವತಾವಾದಿ, ಮಹಾಗುರು, ಮಂತ್ರಪುರುಷ, ಸಮತಾವಾದಿ. ಮರ್ತ್ಯಲೋಕದ ಈ ಕರ್ತನ ಕಮ್ಮಟವನ್ನು ಸ್ವಾರ್ಥಿಯಾದ ಮಾನವ ಮತ್ತು ಪಟ್ಟಭದ್ರ ಹಿತಾಸಕ್ತರು ವರ್ಣ, ಜಾತಿ, ವರ್ಗ, ಅಂತಸ್ತು ಭೇದಗಳಿಂದ ಅಂದಗೆಡಿಸಿದ್ದನ್ನು ಕಂಡು, ಮನನೊಂದು ಕರ್ತನ ಮೇಲಿನ ಅನನ್ಯವಾದ ಭಕ್ತಿಯಿಂದಲೂ, ಸೃಷ್ಟಿಯ ಬಗೆಗಿದ್ದ ಅಭಿಮಾನದಿಂದಲೂ, ಮಾನವ ಕುಲದ ಮೇಲಿನ ಉತ್ಕಟವಾದ ಪ್ರೀತಿಯಿಂದಲೂ ಸುಧಾರಣೆಯನ್ನು ಕೈಗೊಂಡರು. ಮಾನವೀಯ ಮೌಲ್ಯಗಳನ್ನು ಜನಮನದಲ್ಲಿ ಬಿತ್ತಿದರು. ಜಾತಿ ವರ್ಣ ವರ್ಗ ರಹಿತವಾದ ಕಲ್ಯಾಣರಾಜ್ಯ ನಿರ್ಮಾಣಕ್ಕೆ ಶ್ರಮಿಸಿದರು. ಧರ್ಮವೇ ಸಾಧನ ಮತ್ತು ವಿಶ್ವಕಲ್ಯಾಣವೇ ಗುರಿ ಎಂದು ಭಾವಿಸಿದ ಅವರು ಇಷ್ಟಲಿಂಗವೆಂಬ ಕುರುಹನ್ನು, ಲಾಂಛನವನ್ನು ಯಾವುದೇ ಭೇದವಿಲ್ಲದೆ ಎಲ್ಲರಿಗೂ ಕೊಡುವಂತಹ ಧಾರ್ಮಿಕ ಸಮಾನತೆ- ಸ್ವಾತಂತ್ರ್ಯಗಳನ್ನು ಘೋಷಿಸಿದರು. ಇಷ್ಟಲಿಂಗವೆಂಬ, ವಿಶ್ವದಾಕಾರದಲ್ಲಿ ವಿಶ್ವಾತ್ಮನನ್ನು ಭಾವಿಸುವ ಶ್ರೇಷ್ಠ ಲಾಂಛನವನ್ನು ಕಂಡು- ಹಿಡಿದು ಕೊಟ್ಟು “ಲಿಂಗವಂತ ಧರ್ಮ”ದ ಆದ್ಯರಾದರು, ಅವರೆಗೂ ಜಗತ್ತು ಕಂಡರಿಯದ ಕೇಳರಿಯದ ಸಮಾನತೆಯನ್ನು ಸಮಾಜದಲ್ಲಿ ನೆಲೆಗೊಳಿಸಿದರು. ಧರ್ಮಶ್ರೀಯು ಜನಸಾಮಾನ್ಯರ ಮನೆ-ಮನಗಳನ್ನು ಪ್ರವೇಶಿಸುವಂತೆ ವಚನ ವಾಙ್ಮಯವನ್ನು ಕೊಟ್ಟರಲ್ಲದೆ, ಅನುಭವ ಮಂಟಪವೆಂಬ ಮಾದರಿ ಸಂಸ್ಥೆಯ ಮೂಲಕ ಬಯಸಿ ಬಂದವರಿಗೆಲ್ಲಾ ದೀಕ್ಷಾ ಸಂಸ್ಕಾರ, ಧಾರ್ಮಿಕ ತರಬೇತಿ ನೀಡಿದರು. ಶತಶತಮಾನಗಳ ಕಾಲದಿಂದಲೂ ಧಾರ್ಮಿಕ ಸಂಸ್ಕಾರದಿಂದ ವಂಚಿತರಾಗಿದ್ದ ಅಸಂಖ್ಯಾತರು ಬಸವ ಧರ್ಮದ ಪಾವನ ಜಲದಲ್ಲಿ ಮಿಂದು ಪುನೀತರಾದರು. ವಿಶ್ವಸಂಸ್ಥೆಯು ಸಮಸ್ತ ಮಾನವ ಕುಲಕೋಟಿಯ ಸಮಸ್ಯೆಗಳನ್ನು ಕುರಿತು ಚಿಂತನೆಗೈಯುವಂತೆ ಅನುಭವ ಮಂಟಪವು ಮಾನವ ಸಮಾಜದ ಸಮಸ್ಯೆಗಳನ್ನು ಚಿಂತಿಸುತ್ತಲ್ಲದೆ ಉತ್ತಮ ಪರಿಹಾರ ನೀಡಿತು. ಜಗತ್ತಿನ ಧಾರ್ಮಿಕ ಇತಿಹಾಸದಲ್ಲೇ ಅಪೂರ್ವವೆನಿಸುವ ಶರಣ ಸಂದೋಹ ವಿಜೃಂಭಿಸಿತು. ವಿಶ್ವಗುರು ಬಸವಣ್ಣನವರ ಉದಾತ್ತ ಉದ್ದೇಶದ ಕಾರ್ಯಾಚರಣೆಗೆ ಹೆಗಲೆಣೆಯಾಗಿ ದುಡಿಯಲು ಭಾರತದ ಮೂಲೆ ಮೂಲೆಗಳಿಂದ ಜನರು ಧಾವಿಸಿದರು. ಉದಾತ್ತ ಚಿಂತನೆ, ಉನ್ನತವಾದ ತ್ಯಾಗಗಳಿಂದ ಅಮರಾತ್ಮರಾದರು. ಇಷ್ಟೇ ಅಲ್ಲ ವಚನ ಸಾಹಿತ್ಯ ಸಂವಿಧಾನಕ್ಕೆ ಜಾತಿವಾದಿಗಳಿಂದ ಸಂಕಷ್ಟವೆರಗಿದಾಗ ಪ್ರಾಣಾರ್ಪಣೆಗೂ ಸಿದ್ಧರಾದರು.

ಗುರು ಬಸವಣ್ಣನವರು ಯಾವುದೇ ಒಂದು ಜಾತಿ ಮತಕ್ಕೆ ಸೀಮಿತರಾದ ವ್ಯಕ್ತಿಯಲ್ಲ; ಅವರು ಒಂದು ಜಾತಿಯನ್ನು ನಿರ್ಮಿಸಲು ಯತ್ನಿಸಲಿಲ್ಲ. ಸಮಸ್ತ ಮಾನವ ಜನಾಂಗಕ್ಕೆ ದೇವರು-ಧರ್ಮ-ಪೂಜೆಯ ಹಕ್ಕನ್ನು, ಸಮ ಬಾಳ್ವೆಯ ಸೌಲಭ್ಯವನ್ನೂ ಒದಗಿಸಲು ಶ್ರಮಿಸಿದ ಮಹಾ ಮಾನವತಾವಾದಿ. ಜಾತಿ, ವರ್ಣ, ವರ್ಗ, ಲಿಂಗ ಭೇದಗಳಿಲ್ಲದ “ಕಲ್ಯಾಣ ರಾಜ್ಯ” ನಿರ್ಮಾಣಕ್ಕೆ, ವಿಶ್ವಚೇತನವನ್ನು ಚುಳುಕಾಗಿ ಮಾಡಿಕೊಂಡು ಇಷ್ಟಲಿಂಗ ರೂಪದಲ್ಲಿ ಅಂಗದ ಮೇಲೆ ಧರಿಸಿದ “ಲಿಂಗವಂತ”ರು (ದೇವಭಕ್ತರು) ಸ್ವಯಂ ಸೇವಕರಾಗಿ ದುಡಿಯಬೇಕು ಎಂಬುದೇ ಬಸವಣ್ಣನವರ ಆಶೋತ್ತರವಾಗಿತ್ತು. ಅನುಭವ ಮಂಟಪದ ಮಾದರಿಯಲ್ಲಿ ಧರ್ಮ ಸಂಸ್ಥೆಗಳು ಜನರನ್ನು ಸಂಘಟಿಸುವ, ಸಂಸ್ಕರಿಸುವ ಜ್ಞಾನ ಕೇಂದ್ರಗಳಾಗಬೇಕು ಎಂಬುದು ಗುರು ಬಸವಣ್ಣನವರ ಕನಸಾಗಿತ್ತು.

ಆದರೆ, ಆದುದೇನು ? ಆ ಗುರುವಿನ ಹೃದ್ಗತ ಕನಸುಗಳನ್ನು ನಂತರದ ಅನುಯಾಯಿಗಳು ನನಸು ಮಾಡಲಿಲ್ಲ. ಅವರು ನಡೆದು ತೋರಿದ ಪಥವನ್ನು ಸರಿಯಾಗಿಡಲಿಲ್ಲ. ಮಹಾ ಮಾನವತಾವಾದಿಯಾದ ಬಸವ ಗುರುವು ಎಲ್ಲರನ್ನೂ ಮಾತೃಹೃದಯದಿಂದ ಸ್ವಾಗತಿಸಿದಂತೆ ನಂತರದವರು ಸ್ವಾಗತಿಸಲಿಲ್ಲ. ಹೀಗಾಗಿ ಸಂಪೂರ್ಣವಾಗಿ ವಿಕ್ಷತಗೊಂಡ ಸಮಾಜವನ್ನಿಂದು ಕಾಣುತ್ತಿದ್ದೇವೆ. ಧರ್ಮಗುರು ಬಸವಣ್ಣನವರ ವಿಚಾರಕ್ಕೆ ವಿರುದ್ಧವಾದ, ವಚನ ಸಾಹಿತ್ಯ ಸಂವಿಧಾನ ಮನ್ನಿಸದ, ಶರಣ ಪಥಕ್ಕೆ ಸಲ್ಲದ ನಡೆ-ನುಡಿ, ಭೇದ-ಭ್ರಾಂತಿ, ಅಜ್ಞಾನ-ಮೌಢ್ಯತೆಗಳಿಂದ ತುಂಬಿರುವ ಅನುಯಾಯಿಗಳನ್ನೇ ಹೆಚ್ಚಾಗಿ ಕಾಣುತ್ತೇವೆ. ಇದು ಸರಿಯೇ ? ಆದ್ದರಿಂದ ಎಲ್ಲರೂ ಆತ್ಮ ನಿರೀಕ್ಷಣೆ ಮಾಡಿಕೊಳ್ಳುವ, ಹಳಿ ತಪ್ಪಿದ ಈ ಸಮಾಜದ ಗಾಡಿಯನ್ನು ಹಳಿಯ ಮೇಲೆ ತಂದಿರಿಸುವ ಪ್ರಾಮಾಣಿಕ ಪ್ರಯತ್ನವನ್ನಿಂದು ಮಾಡಬೇಕಾಗಿದೆ.

ಶ್ರೀ ಗುರು ಬಸವಣ್ಣನವರ ದಿವ್ಯಪ್ರೇರಣೆಯಂತೆ, ಅವರು ಲಿಂಗೈಕ್ಯರಾದ ಕೂಡಲ ಸಂಗಮ ಸುಕ್ಷೇತ್ರದಲ್ಲಿಯೇ ದಿ. 30-7-1987 ಶ್ರಾವಣ ಶುದ್ಧ ಬಸವ ಪಂಚಮಿಯಂದು “ಬಸವ ಧರ್ಮ ಪೀಠ” ಎಂಬ ವಿಶ್ವಸ್ತ ಸಂಸ್ಥೆಯನ್ನು ವಿದ್ಯುಕ್ತವಾಗಿ ಸ್ಥಾಪಿಸಿ, ಮುಂಬಯಿಯ 1950 ನೇ ಇಸವಿಯ ಟ್ರಸ್ಟ್ ಆಕ್ಟಿನ 18ನೇ ಕಲಮಿನನ್ವಯ ಬೆಳಗಾವಿಯ ಅಸಿಸ್ಟೆಂಟ್ ಚಾರಿಟಿ ಕಮೀಷನರ್ ಅವರಲ್ಲಿ ನೋಂದಾಯಿಸಲಾಗಿದೆ.

ತಕ್ಷಣವೇ ಕಾರ್ಯಾನ್ಮುಖರಾಗಲು ಅನುಕೂಲವಾಗುವಂತೆ ಮೂವರು ಸದಸ್ಯರಿಂದ ವಿಶ್ವಸ್ತ ಸಂಸ್ಥೆಯನ್ನು ಆರಂಭಿಸಿದ್ದು ಇನ್ನು ಮೂವರಿಗೆ ಸೇರ್ಪಡೆಗೆ ಅವಕಾಶವಿದೆ. ಬಸವ ಧರ್ಮ ಪೀಠದ ನಿಯಮಾವಳಿಯನ್ನು ಓದಿ, ಕೆಲವು ವಿಶಿಷ್ಟ ತತ್ತ್ವಗಳಿಗೆ ಬದ್ಧರಾಗುವ ಎಲ್ಲರಿಗೂ ಅವಕಾಶವಿದೆ.

ಪೂಜ್ಯ ಶ್ರೀ ಸದ್ಗುರು ಲಿಂಗಾನಂದ ಸ್ವಾಮಿಗಳು ಬಸವ ಧರ್ಮ ಪೀಠದ ಗೌರವಾಧ್ಯಕ್ಷರಾಗಿಯೂ, ಪೂಜ್ಯ ಶ್ರೀ ಜಗದ್ಗುರು ಮಾತೆ...

(ಮೂಲ ಪುಟದ ಕೊನೆಯಲ್ಲಿ ಪಠ್ಯವು ಇಲ್ಲಿಗೆ ಅಪೂರ್ಣವಾಗಿದೆ)

ಆಕರ: ಶರಣಕಿರಣ, ಜನವರಿ-1988

ಮೌಲ್ಯಗಳು

  • ಕಾಯಕಪ್ರಾಮಾಣಿಕವಾಗಿ ದುಡಿಯುವುದು ಹಾಗೂ ಅದರಲ್ಲಿ ದೈವಿಕತೆಯನ್ನು ಕಾಣುವುದು
  • ದಾಸೋಹಕಾಯಕದಿಂದ ಬಂದುದರಲ್ಲಿ ತಮಗೆ ಬೇಕಾದುದನ್ನು ಇಟ್ಟುಕೊಂಡು, ಉಳಿದದ್ದನ್ನು ಸಮಾಜದ ಕಲ್ಯಾಣಕ್ಕಾಗಿ ಮತ್ತು ಕಷ್ಟದಲ್ಲಿರುವವರಿಗೆ ನಿಸ್ವಾರ್ಥವಾಗಿ ಹಂಚುವುದೇ ದಾಸೋಹ
  • ಸಮಾನತೆಹುಟ್ಟಿನಿಂದ ಎಲ್ಲರೂ ಸಮಾನರು ಎಂದು ಸಾರಿ, ಮೇಲು-ಕೀಳು ಎಂಬ ಭೇದಭಾವವನ್ನು ತೊಡೆದು ಹಾಕುವುದು