ಬಸವ ಧರ್ಮ ಪೀಠBasava Dharma Peeta
ಮೆನುಮುಚ್ಚಿ
ಪ್ರಸಾರಕರ ನೋಂದಣಿ+91 95919 38666
ಪೂಜ್ಯ ಡಾ. ಮಾತೆ ಮಹಾದೇವಿಯವರ ಭಾವಚಿತ್ರ

ಪ್ರಪ್ರಥಮ ಮಹಿಳಾ ಜಗದ್ಗುರು ಪೂಜ್ಯ ಡಾ ಮಾತೆ ಮಹಾದೇವಿ

ಪೂಜ್ಯ ಡಾ ಮಾತೆ ಮಹಾದೇವಿಯವರ ಜೀವನ ಮತ್ತು ಸಾಧನೆ

  1. ಪೂಜ್ಯ ಡಾ ಮಾತೆ ಮಹಾದೇವಿಯವರು 13-3-1946 ರಂದು ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ತಂದೆ ಶರಣ ಡಾ. ಬಸಪ್ಪನವರು ಹಾಗೂ ತಾಯಿ ಶರಣೆ ಗಂಗಮ್ಮನವರಿಗೆ ಜನಿಸಿದರು.

  2. 1965 ರಲ್ಲಿ ಬಿ. ಎಸ್ ಸಿ. (B. Sc.) ಪದವಿ ಪಡೆದರು. ಪೂಜ್ಯ ಲಿಂಗಾನಂದ ಸ್ವಾಮಿಜಿಯವರ ಪ್ರವಚನದಿಂದ ಪ್ರಭಾವಿತರಾಗಿ 5-4-1966 ರಲ್ಲಿ ಜಂಗಮ ದೀಕ್ಷೆ ಪಡೆದು ಬಸವತತ್ವ ಪ್ರಚಾರಕ್ಕೆ ಅಣಿಯಾಗುತ್ತಾರೆ.

  3. 1966ರಲ್ಲಿ ಋಷಿಕೇಶದಲ್ಲಿ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. ಅದೇ ಸಮಯದಲ್ಲಿ ಗಂಗಾ ತರಂಗ ಎಂಬ ಅನುಭಾವಪೂರಿತ ವಚನಗಳ ಗ್ರಂಥ ರಚಿಸುತ್ತಾರೆ.

  4. 1967ರಲ್ಲಿ ಬಸವಣ್ಣನವರ ಅಷ್ಟ ಶತಮಾನೋತ್ಸವದ ಅಂಗವಾಗಿ ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಪ್ರೇರಣೆಯಿಂದ 800 ಪುಟಗಳ ಬೃಹತ್ ಗ್ರಂಥವಾದ ಬಸವತತ್ವ ದರ್ಶನ ಕೇವಲ 3 ತಿಂಗಳಲ್ಲಿ ರಚಿಸಿತ್ತಾರೆ

  5. ಬಸವ ಧರ್ಮ ಪ್ರಚಾರಕ್ಕೆ ಅನುಕೂಲವಾಗಲೆಂದು 1968 ಎಪ್ರಿಲ್ 13 ರಂದು ವೀರ ವಿರಾಗಿಣಿ ಅಕ್ಕಮಹಾದೇವಿಯವರ ಜಯಂತಿಯಂದು ಪೂಜ್ಯ ಮಾತಾಜಿಯವರು ಧಾರವಾಡದಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ ಮಾಡಿದರು.

  6. 1969 ರಲ್ಲಿ ಪೂಜ್ಯ ಮಾತಾಜಿಯವರು ಎಂ. ಎ. ತತ್ವಜ್ಞಾನ ಪದವಿ ಪಡೆದರು. ಅವರು ಎಂ. ಎ. ಮಾಡುವಾಗ ತಾವು ಬರೆದ ಬಸವ ತತ್ವ ದರ್ಶನ ಪುಸ್ತಕವು ಅವರಿಗೇ ಪಠ್ಯ ಪುಸ್ತಕವಾಗಿತ್ತು. ಇದು ಅವರ ಅದ್ವಿತೀಯ ಪ್ರತಿಭೆಗೆ ಸಾಕ್ಷಿಯಾಗಿದೆ

  7. 14-1-1970 ರಂದು ಲಿಂಗಾಂಗಯೋಗಿ ಸಿದ್ದರಾಮೇಶ್ವರ ಜಯಂತಿಯಂದು ಕಲ್ಯಾಣ ಕಿರಣ ಮಾಸ ಪತ್ರಿಕೆಯನ್ನು ಪ್ರಾರಂಭ ಮಾಡುತ್ತಾರೆ. ಪತ್ರಿಕೆ ಮಾಧ್ಯಮದ ಮೂಲಕ ಬಸವತತ್ವ ಪ್ರಚಾರಕ್ಕೆ ಅಣಿಯಾಗುತ್ತಾರೆ.

  8. ಹಿಂದಿನ ಧರ್ಮಪೀಠ ಕೇವಲ ಪುರುಷರಿಗೆ ಸೀಮಿತವಾಗಿತ್ತು. ಮಹಿಳೆಯರು ಧರ್ಮಗುರುವಾಗಬಹುದೆಂದು ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಮಾತಾಜಿ ತೋರಿಸಿಕೊಟ್ಟರು. 21-4-1970 ರಂದು ಐತಿಹಾಸಿಕ ಅಕ್ಕಮಹಾದೇವಿ ಅನುಭಾವ ಪೀಠ ಆರೋಹಣ ಮಾಡಿದರು. ಬಸವಣ್ಣನವರ ವಚನದಂತೆ ಮಹಿಳಾ ಸಮಾನತೆಯ ತತ್ವವನ್ನು ಎತ್ತಿ ಹಿಡಿದರು. (ಇದೇ ಆಶ್ರಮದಲ್ಲಿ ಅನಾಥರಿಗೆ ಹಾಗೂ ವೃದ್ಧರಿಗೆ ಆಶ್ರಯ ನೀಡುತ್ತಾರೆ.)

  9. 9-12-1973 ರಂದು ಪೂಜ್ಯ ಮಾತಾಜಿಯವರು ಸಾಮಾಜಿಕ ಕಾದಂಬರಿ ಹೆಪ್ಪಿಟ್ಟ ಹಾಲು ಪುಸ್ತಕ ಬಿಡುಗಡೆ ಮಾಡಿದರು. ಈ ಕೃತಿಗೆ ರಾಜ್ಯ ಸಾಹಿತ್ಯ ಆಕಾಡೆಮಿ ಪುರಸ್ಕಾರ ಲಭಿಸಿತು

  10. 1975 ರಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ನಿರ್ಮಾಣ ಮಾಡಿ ದಿನಾಂಕ 4-5-1975 ರ ಬಸವ ಜಯಂತಿಯಂದು ಉದ್ಘಾಟನೆ ಮಾಡಿದರು

  11. 14-5-1976 ರಂದು ಇಂಗ್ಲೆಂಡ್‍ಗೆ ತೆರಳಿ ಹೊರದೇಶದಲ್ಲಿ ಬಸವ ಧರ್ಮ ಪ್ರಚಾರಕ್ಕೆ ಅಣಿಯಾದರು

  12. 1977 ರಲ್ಲಿ ವಿಶ್ವ ಕಲ್ಯಾಣ ಮಿಷನ್ (ಟ್ರಸ್ಟ್) ಸ್ಥಾಪನೆ ಮಾಡಿದರು. ಇದೇ ವಿಶ್ವ ಕಲ್ಯಾಣ ಮಿಷನ್ ಮೂಲಕ 1978 ರಲ್ಲಿ ಬೆಂಗಳೂರಿನ ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಅನಾಥಾಶ್ರಮ ನಿರ್ಮಾಣ ಮಾಡಿದರು. ಈ ಆಶ್ರಮದಲ್ಲಿ ಅನಾಥ ಮಕ್ಕಳಿಗೆ ಹಾಗೂ ವೃದ್ಧರಿಗೆ ಆಶ್ರಯ ನೀಡಿದರು

  13. 1980 ರಲ್ಲಿ ರಾಷ್ಟ್ರೀಯ ಬಸವದಳ ಸಂಘಟನೆ ಪ್ರಾರಂಭಿಸಿದರು. ರಾಷ್ಟ್ರೀಯ ಬಸವದಳವು ಸಮಾಜೋ-ಧಾರ್ಮಿಕ ಸಂಘಟನೆಯಾಗಿದೆ. ಬಸವತತ್ವದಡಿಯಲ್ಲಿ ಸಮಾಜದ ಹಿತಕ್ಕಾಗಿ ಶ್ರಮಿಸುವ ಈ ಸಂಘಟನೆಯು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಸುಮಾರು 1200 ಶಾಖೆಗಳನ್ನು ಹೊಂದಿದೆ.

    1980-1981 ಅಮೆರಿಕಾ ಮತ್ತು ಕೆನೆಡಾದಲ್ಲಿ ಬಸವ ಧರ್ಮ ಪ್ರಚಾರ ಮಾಡಿದರು. ಇಡಿ ವಿಶ್ವಕ್ಕೆ ಬಸವತತ್ವವನ್ನು ಪರಿಚಯಿಸುವ ಹಂಬಲ ಪೂಜ್ಯ ಮಾತಾಜಿಯವರದಾಗಿತ್ತು

  14. ದೃಶ್ಯ ಮಾಧ್ಯಮದ ಮೂಲಕ ಬಸವತತ್ವ ಪ್ರಚಾರ ಮಾಡಲು 1983 ರಲ್ಲಿ ಗುರು ಬಸವಣ್ಣನವರ ಜೀವನ ಚರಿತ್ರೆ ಆಧರಿಸಿ ಕ್ರಾಂತಿಯೋಗಿ ಬಸವಣ್ಣ ಚಲನಚಿತ್ರ ನಿರ್ಮಾಣ ಮಾಡಿದರು. 3-8-1983 ರಂದು ಈ ಚಿತ್ರ ಬಿಡುಗಡೆಯಾಯಿತು

  15. 1987 ರಲ್ಲಿ ಕೂಡಲಸಂಗಮವನ್ನು ಲಿಂಗಾಯತ ಧರ್ಮ ಕ್ಷೇತ್ರವೆಂದು ಘೊಷಣೆ ಮಾಡಿದರು. ನಾರಾಯಣಪುರ ಆಣೆಕಟ್ಟಿನ ಹಿನ್ನಿರಿನಿಂದ ಜಲಾವೃತವಾತವಾಗುವ ಕೂಡಲಸಂಗಮ ದೇವಾಲಯ ಸ್ಥಳಾಂತರ ಮಾಡಲು ಸರ್ಕಾರ ನಿರ್ಧರಿಸುತ್ತದೆ. ಆಗ ಪೂಜ್ಯ ಮಾತಾಜಿಯವರು ಪ್ರತಿಭಟನೆ ಮಾಡಿ ಸ್ಥಳಾಂತರವಾಗದಂತೆ ತಡೆಯುತ್ತಾರೆ.

  16. ಜನವರಿ 13, 14, 14 ರಂದು ಕೂಡಲಸಂಗಮದಲ್ಲಿ ಐತಿಹಾಸಿಕವಾದ ಮೊದಲನೆ ಶರಣ ಮೇಳ ನಡೆದು ಸುಮಾರು 2 ಲಕ್ಷಕ್ಕೂ ಅಧಿಕ ಶರಣರು ಪಾಲ್ಗೊಂಡು ಅತ್ಯಂತ ಯಶಸ್ವಿಯಾಗಿ ನೆರೆವೇರಿತು.

  17. 1992 ಜನವರಿ 13 ರಂದು ಬಸವಣ್ಣನವರ ತಪೋ ಭೂಮಿ ಕೂಡಲಸಂಗಮದಲ್ಲಿ ಬಸವ ಧರ್ಮಪೀಠ ಸ್ಥಾಪನೆ ಮಾಡಿದರು. ಬಸವ ಧರ್ಮದ ಪೀಠದ ಪ್ರಮುಖ ಉದ್ದೇಶ ಬಸವತತ್ವ ಪ್ರಚಾರ ಮಾಡಿ ಜನರಿಗೆ ಅರಿವು ಮೂಡಿಸುವುದು. ಬಸವಧರ್ಮಪೀಠದಲ್ಲಿ ಇಂದು 30 ಕ್ಕೂ ಹೆಚ್ಚು ಜಂಗಮರು ಬಸವತತ್ವ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಿಗಿದ್ದಾರೆ.

  18. 1993 – ಪ್ರಥಮ ಬಸವ ಧರ್ಮ ಸಮ್ಮೇಳನ ತಮಿಳುನಾಡಿನ ಊಟಿಯಲ್ಲಿ ಮಾಡಿದರು. ಹೊರ ರಾಜ್ಯಗಳಿಗೆ ಬಸವತತ್ವ ಪ್ರಚಾರ ಮಾಡುವ ಉದ್ದೇಶ ಅವರದಾಗಿತ್ತು.

  19. 1994 – ಅಂದಿನ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದಿನಲ್ಲಿ ಎರಡನೇ ಬಸವಧರ್ಮ ಸಮ್ಮೆಳನ ನೆರೆವೇರಿಸಿದರು

  20. 1995 - ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮೂರನೇ ಬಸವಧರ್ಮ ಸಮ್ಮೇಳನ ನೆರೆವೇರಿಸಿದರು

  21. 1996 - ನಾಲ್ಕನೆ ಬಸವಧರ್ಮ ಸಮ್ಮೇಳನ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ನೆರೆವೇರಿಸಿದರು. ಇದೇ ವರ್ಷ ಪೂಜ್ಯ ಮಾತೆ ಮಹಾದೇವಿಯವರು ಬರೆದ ’ಲಿಂಗಾಯತರು ವೀರಶೈವರಲ್ಲ’ ಪುಸ್ತಕವು ದೊಡ್ಡ ಮಟ್ಟದ ಸಂಚಲನ ಮೂಡಿಸಿತು. ಸಾಕಷ್ಟು ಆಧಾರಗಳ ಮೂಲಕ ತಾತ್ವಿಕವಾಗಿ ಲಿಂಗಾಯತರು ವೀರಶೈವರಲ್ಲ ಎಂದು ಪ್ರತಿಪಾದಿಸಿದರು. ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವಾಗಿದೆ ಅದರಲ್ಲಿ ಹಲವು ಉಪಪಂಗಡಳಲ್ಲಿ ವೀರಶೈವವು ಒಂದು ಪಂಗಡವಾಗಿದೆ ಎಂದು ಸ್ಪಷ್ಟಪಡಿಸಿದರು.

    ಇದೇ ವರ್ಷದಲ್ಲಿ 19-8-1996 ರಂದು ಬಸವ ವಚನ ದೀಪ್ತಿ ಪುಸ್ತಕ ಬಿಡುಗಡೆ ಮಾಡಿದರು. ಬಸವಣ್ಣವರನ್ನು ನಾಲ್ಕು ಕಾಲಿನ ಎತ್ತೆಂದು ಬಿಂಬಿಸಿ ಅವರ ತತ್ವಕ್ಕೆ ತಿಲಾಂಜಲಿ ಹಾಡಿದ್ದರು. ವಚನಗಳು ಪ್ರಚಾರಕ್ಕೆ ಬಂದ ಮೇಲೆ ಜನರಿಗೆ ಈ ಹುನ್ನಾರ ಅರ್ಥವಾಯಿತು.

  22. ಗುರು ಬಸವಣ್ಣನವರು ಗುಡಿ ಸಂಸ್ಕೃತಿಯನ್ನು ತ್ಯಜಿಸಿ ದೇಹವನ್ನೆ ದೇವಾಲಯವನ್ನಾಗಿ ಮಾಡುವುದನ್ನು ತೋರಿಸಿಕೊಟ್ಟರು. ದೇವರ ಕುರುಹಾಗಿ ಇಷ್ಟಲಿಂಗವನ್ನು ನೀಡಿದರು. ಆದರೆ ತದನಂತರ ಕೆಲವು ಸ್ವಾರ್ಥಿಗಳು ತಮ್ಮ ಲಾಭಕ್ಕಾಗಿ ಲಿಂಗಾಯತರನ್ನು ಮತ್ತೆ ಗುಡಿ ಸಂಸ್ಕೃತಿಗೆ ಕರೆದೊಯ್ದರು.

  23. ಇದನ್ನು ತಪ್ಪಿಸಲು ಪೂಜ್ಯ ಮಾತಾಜಿಯವರು ಬಸವಣ್ಣನವರ ವಚನಾಂಕಿತವನ್ನು ತಿದ್ದುಪಡಿ ಮಾಡಿದರು. ಬಸವಣ್ಣನವರ ವಚನಗಳಲ್ಲಿ ಪೌರಾಣಿಕ ಶಿವನನ್ನು ವರ್ಣಿಸುವ ವಚನಗಳಿಗೆ ’ಕೂಡಲಸಂಗಮ’ ಉಳಿಸಿ, ನಿರಾಕಾರ ದೇವನನ್ನು ಸಂಭೋದಿಸುವ ವಚನಗಳಿಗೆ ’ಲಿಂಗದೇವ’ ಎಂದು ಬಳಸಿದರು. ಇದರಿಂದ ಸಾಕಷ್ಟು ವಿರೋಧ ಅನುಭವಿಸಿದರು. ಈಗಿನ್ ಪೀಳಿಗೆ ಇದನ್ನು ವಿರೋಧಿಸಿದರೂ ಮುಂದಿನ ಪೀಳಿಗೆ ಇದನ್ನು ಸ್ವಾಗತಿಸುತ್ತದೆ ಎಂದು ಹಲವು ಬಾರಿ ಹೇಳಿದ್ದಾರೆ.

  24. 8-8-1997 ರಂದು ಪೂಜ್ಯ ಮಾತಾಜಿಯವರ ಪ್ರೇರಣೆಯಿಂದ ಬಸವಣ್ಣನವರ ಭಾವಚಿತ್ರವಿರುವ 2 ರೂ. ಅಂಚೆಚೀಟಿ ಬಿಡುಗಡೆಗೆಯಾಯಿತು

    1997 ರಲ್ಲಿ ಲಿಂಗಾಯತ ಧರ್ಮ ಮಾನ್ಯತೆಗಾಗಿ ದೆಹಲಿಯಲ್ಲಿ ಐದನೆಯ ಬಸವಧರ್ಮ ಸಮ್ಮೇಳನ ಬೃಹತ್ ಸಮಾವೇಶ ಹಾಗೂ ರ್‍ಯಾಲಿ ನಡೆಸಿದರು. 2001 ರ ಜನಗಣತಿಯಲ್ಲಿ ’ಲಿಂಗಾಯತ ಧರ್ಮ’ ವೆಂದು ಬರೆಯಬೇಕೆಂದು ಜನಜಾಗೃತಿ ಮಾಡಿದರು. ಇದು ಲಿಂಗಾಯತ ಧರ್ಮದ ಹೋರಾಟದಲ್ಲಿ ಐತಿಹಾಸಿಕ ದಿನವಾಯಿತು

  25. 1998 ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಆರನೆಯ ಬಸವಧರ್ಮ ಸಮ್ಮೇಳನ ನೆರೆವೇರಿಸಿದರು

  26. 1999 ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಏಳನೇ ಬಸವಧರ್ಮ ಸಮ್ಮೇಳನ ಈಚಲಕರಂಜಿಯಲ್ಲಿ ಯಶಸ್ವಿಯಾಗಿ ನೆರೆವೇರಿಸಿದರು

  27. 30-4-2002 ರಂದು ಶರಣಭೂಮಿ ಬಸವಕಲ್ಯಾಣದಲ್ಲಿ ಸಾಕಷ್ಟು ವಿರೋಧದ ನಡುವೆ ಪ್ರಥಮ ಕಲ್ಯಾಣ ಪರ್ವ ಮಾಡಿದರು. 12ನೇ ಶತಮಾನದಲ್ಲಿ ಕಲ್ಯಾಣಕ್ರಾಂತಿಯಾದಾಗ ಚದುರಿಹೋದ ಶರಣರು ಮತ್ತೆ ಮರಳಿ ಬಸವಕಲ್ಯಾಣಕ್ಕೆ ಬರುವಂತಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶರಣರಿಗೆ ಸಾಕಷ್ಟು ಕಿರುಕುಳ ಹಾಗೂ ತೊಂದರೆಗಳನ್ನು ಕಿಡಿಗೇಡಿಗಳು ನೀಡಿದರು. ವಿರೋಧದ ನಡುವೆಯೆ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು.

  28. 2005 ದೆಹಲಿಯ ಮಹಾವೀರ ವಾಟಿಕಾದಲ್ಲಿ ಪ್ರಥಮ ಲಿಂಗಾಯತ ಧರ್ಮ ಸಮ್ಮೇಳನ ನೆರವೇರಿಸಿದರು

  29. 2006 ರಲ್ಲಿ ಮಹಾರಾಷ್ಟ್ರದ ಅಲ್ಲಮಗಿರಿಯಲ್ಲಿ ಪ್ರಥಮ ಗಣಮೇಳ ಯುಗಾದಿಯಂದು ವಿಶೇಷ ಜನಸಮಾವೇಶದ ಮೂಲಕ ಪ್ರಾರಂಭ ಮಾಡಿದರು.

  30. ಬಸವಣ್ಣನವರ ನಾಣ್ಯ ಬಿಡುಗಡೆಗಾಗಿ ಕೆಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು. 23-6-2006 ರಂದು ಬಸವಣ್ಣನವರ ಮುದ್ರೆಯುಳ್ಳ 5 ರೂ. ನಾಣ್ಯವನ್ನು ಮಾನ್ಯ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ್ ಸಿಂಗ್ ರವರು ಬಿಡುಗಡೆ ಮಾಡಿದರು.

  31. 2007 ತಮಿಳುನಾಡಿನ ಚೆನೈನಲ್ಲಿ ಎರಡನೇ ಲಿಂಗಾಯತ ಧರ್ಮ ಸಮ್ಮೇಳನ ನೆರವೇರಿಸಿದರು

  32. 2008 ದೆಹಲಿಯಲ್ಲಿ ಪುನಃ ಮೂರನೇ ತೃತಿಯ ಲಿಂಗಾಯತ ಧರ್ಮ ಲಿಂಗಾಯತ ಧರ್ಮ ಸಮ್ಮೇಳನ ನೆರವೇರಿಸಿದರು

  33. 2011 ಮಹಾರಾಷ್ಟ್ರದ ಪುಣೆಯಲ್ಲಿ ನಾಲ್ಕನೇ ಲಿಂಗಾಯತ ಧರ್ಮ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನೆರೆವೇರಿಸಿದರು.

  34. ಶರಣಭೂಮಿ ಬಸವಕಲ್ಯಾಣವು ಬಸವಾದಿ ಶರಣರನ್ನು ಪರಿಚಯಿಸುವ ತಾಣವಾಗಿ ಮಾಡಬೇಕೆಂಬುದು ಪೂಜ್ಯ ಮಾತಾಜಿಯವರ ಸಂಕಲ್ಪವಾಗಿತ್ತು. ಈ ನಿಟ್ಟಿನಲ್ಲಿ 2012 ರಲ್ಲಿ 108 ಅಡಿ ಎತ್ತರದ ಗುರು ಬಸವಣ್ಣನವರ ಪುತ್ಥಳಿ ಬಸವಕಲ್ಯಾಣದಲ್ಲಿ ನಿರ್ಮಿಸಿ ಲೋಕಾರ್ಪಣೆ ಮಾಡಿದರು. ಶರಣರನ್ನು ಪರಿಚಯಿಸುವ ಶರಣಗ್ರಾಮ ಹಾಗೂ ಗುಹೆಗಳನ್ನು ನಿರ್ಮಿಸಿದ್ದಾರೆ. ಇದೇ ಆಶ್ರಮದಲ್ಲಿ ಅನಾಥ ಮಕ್ಕಳಿಗೆ ಹಾಗೂ ವೃದ್ಧರಿಗೆ ಆಶ್ರಯ ನೀಡುತ್ತಾರೆ

  35. 2013 ರಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಭಾರಿ ಜನಸಮೂಹದ ಮೂಲಕ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಹೋರಾಟ ಮಾಡಿದರು.

    12-8-2013 ರಂದು ಡಿವೈನ್ ಹಾಂಡ್ಸ ಇಂಟರ್ ನ್ಯಾಷನಲ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ನೀಡಲಾಯಿತು

  36. 19-7-2017 ರಂದು ಬೀದರ್ ನಲ್ಲಿ ನಡೆದ ಐತಿಹಾಸಿಕ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಪೂಜ್ಯ ಮಾತಾಜಿಯವರು ಇದರ ನೇತೃತ್ವ ವಹಿಸಿದ್ದರು. ಈ ರ್‍ಯಾಲಿ ಇಡೀ ರಾಷ್ಟ್ರದಲ್ಲಿ ಸಂಚಲನ ಮೂಡಿಸಿತು. ಹಲವು ಮಠಾಧೀಶರು, ಬಸವಾಭಿಮಾನಿಗಳು ಮತ್ತು ನಾಯಕರು ಈ ರ್‍ಯಾಲಿ ಗೆ ಬೆಂಬಲ ನೀಡಿದರು. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ವ್ಯಾಪಕ ಬೆಂಬಲ ದೊರಕಿತು.

    2017-2018 - ಬೆಳಗಾವಿ, ಲಾತೂರ್, ಕಲಬುರ್ಗಿ, ಹುಬ್ಬಳ್ಳಿ, ಬೆಂಗಳೂರು, ವಿಜಯಪುರ, ಕೊಲ್ಲಾಪುರ, ಬಸವಕಲ್ಯಾಣ, ಸೊಲ್ಲಾಪುರ, ಔರಂಗಾಬಾದ್, ಹೀಗೆ ಇನ್ನಿತರ ಸ್ಥಳಗಳಲ್ಲಿ ನಡೆದ ಲಿಂಗಾಯತ ಸ್ವತಂತ್ರ ಧರ್ಮದ ರ್‍ಯಾಲಿಗಳಲ್ಲಿ ಪೂಜ್ಯ ಮಾತಾಜಿಯವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು

  37. 10,11,12 ಡಿಸೆಂಬರ್ 2018 ರಂದು ನವದೆಹಲಿಯಲ್ಲಿ ಐತಿಹಾಸಿಕ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಹೋರಾಟ ಮಾಡಿದರು

  38. ತಮ್ಮ 73 ವರ್ಷದ ಜೀವನದಲ್ಲಿ 200ಕ್ಕೂ ಹೆಚ್ಚು ಧಾರ್ಮಿಕ ಮತ್ತು ಸಾಮಾಜಿಕ ಪುಸ್ತಕಗಳನ್ನು ಬರೆದಿದ್ದಾರೆ, 400 ಕ್ಕೂ ಹೆಚ್ಚು ಭಕ್ತಿ ಗೀತೆಗಳನ್ನ ರಚಿಸಿದ್ದಾರೆ, 30 ಕ್ಕೂ ಹೆಚ್ಚು ಲಿಂಗಾಯತ ಧರ್ಮ ಪ್ರಚಾರಕರನ್ನು ತಯಾರು ಮಾಡಿದ್ದಾರೆಂಬುದು ಹೆಮ್ಮೆಯ ವಿಷಯವಾಗಿದೆ. 32 ಶರಣಮೇಳ ಮತ್ತು 17 ಕಲ್ಯಾಣ ಪರ್ವಗಳನ್ನು ಯಶಸ್ವಿಯಾಗಿ ನೆರೆವೇರಿಸಿದ್ದಾರೆ. ಅದಲ್ಲದೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ದೆಹಲಿಯ ಹಲವು ಕಡೆ ಬಸವಮಂಟಪಗಳನ್ನು ನಿರ್ಮಿಸಿ ಸಾಮೊಹಿಕ ಪ್ರಾರ್ಥನೆ, ಬಸವೋತ್ಸವ, ಶರಣೋತ್ಸವ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕಾರ್ಯ ರೂಪಕ್ಕೆ ತಂದ ಕೀರ್ತಿ ಪೂಜ್ಯ ಮಾತಾಜಿಯವರಿಗೆ ಸಲ್ಲುತ್ತದೆ. ಇಂತಹ ದಿವ್ಯ ಬಸವ ಚೇತನವನ್ನು 14 ಮಾರ್ಚ 2019ರಂದು ಕಳೆದುಕೊಂದಿರುವುದು ಅತ್ಯಂತ ದುಖಃದಾಯಕವಾಗಿದೆ. ಮಾತಾಜಿಯವರ ದಿವ್ಯ ಚೇತನ ನಮಗೆಲ್ಲರಿಗೂ ದಾರಿ ದೀಪವಾಗಿದೆ